ಬೇಗ್ರಾಮ್
ಆಫ್‍ಘಾನಿಸ್ತಾನದ ಒಂದು ಪ್ರಾಚೀನ ಪಟ್ಟಣ. ಕಾಬೂಲ್ ನಗರದ ಪಶ್ಚಿಮಕ್ಕೆ 80 ಕಿಮೀ ದೂರದಲ್ಲಿದೆ. ಕಪಿಶಾ ಎಂಬ ಹೆಸರೂ ಇತ್ತು. ಕ್ರಿ.ಶ. 1-2ನೆಯ ಶತಮಾನಗಳಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಕುಷಾಣ ಚಕ್ರವರ್ತಿಗಳು ಈ ಪಟ್ಟಣವನ್ನು ತಮ್ಮ ಬೇಸಿಗೆ ಕಾಲದ ರಾಜಧಾನಿಯಾಗಿ ಮಾಡಿಕೊಂಡಿದ್ದರು. 

	ಈ ಪ್ರಾಚೀನ ರಾಜಧಾನಿಯ ಸಂಸ್ಕøತಿಯ ಮೇಲ್ಮೈಯನ್ನು ಗುರುತಿಸಲು ಹ್ಯಾಕಿನ್ ಹಾಗೂ ಗ್ಹಿರ್ಷಮನ್ ಎಂಬುವರು ಇಲ್ಲಿ ವೈಜ್ಞಾನಿಕ ಪರಿಶೋಧನೆ ಮತ್ತು ಉತ್ಖನನ ನಡೆಸಿದರು (1937). ಇಲ್ಲಿಯ ಜನ ಉತ್ಕøಷ್ಟ ಕಲಾನಿಪುಣತೆ ಬೆಳೆಸಿಕೊಂಡಿದ್ದರೆಂಬುದಕ್ಕೆ ವಿಪುಲ ಆಧಾರಗಳು ದೊರೆತಿವೆ. ಬೇಗ್ರಾಮ್ ನಗರ ಕಲ್ಲಿನ ಅಡಿಪಾಯ ಹಾಗೂ ಮಣ್ಣಿನ ಇಟ್ಟಿಗೆಗಳಿಂದಾದ ಗೋಡೆಗಳುಳ್ಳ ಮನೆಗಳನ್ನೂ ಬುರುಜುಗಳುಳ್ಳ ಕೋಟೆಯಿಂದ ಭದ್ರವಾದ ಅರಮನೆಯನ್ನೂ ಹೊಂದಿತ್ತು. ಅರಮನೆಯ ಗೋಡೆಗಳಿಗೆ ನೀಲಿ ಬಣ್ಣದ ಗಾರೆ ಲೇಪಿಸಲಾಗಿತ್ತು. ಗೋಡೆಗಳಲ್ಲಿ ಗೂಡುಗಳಿದ್ದವು. ಈ ಪಟ್ಟಣ ಗ್ರೀಸ್, ಬ್ಯಾಕ್ಟ್ರಿಯಾ, ಸೋವಿಯತ್ ಮೊದಲಾದ ದೇಶಗಳ ನಗರ ನಿರ್ಮಾಣ ಕಲೆಯಿಂದ ಪ್ರಭಾವಿತವಾಗಿತ್ತು. ಕುಷಾಣ ಚರ್ಕವರ್ತಿಗಳಾದ ಹುವಿಷ್ಕ ಹಾಗೂ ವಾಸುದೇವ ಇವರ ಅನೇಕ ನಾಣ್ಯಗಳು ಇಲ್ಲಿ ದೊರೆತಿವೆ. ನಿತ್ಯಜೀವನಕ್ಕೆ ಸಂಬಂಧಿಸಿದ ಕೆಂಪು ಮಣ್ಣಿನ ಪಾತ್ರೆಗಳು, ದಪ್ಪಕತ್ತಿನ ಹೂಜಿಗಳು, ಬೋಗುಣಿ, ಬಟ್ಟಲು, ತಟ್ಟೆಗಳು ಗಮನೀಯ ಪ್ರಮಾಣದಲ್ಲಿ ದೊರೆತಿವೆ. ಕೆಲವು ಪಾತ್ರೆಗಳ ಮೇಲೆ ಭೂಮಿತಿಯ ಚಿಹ್ನೆಗಳು, ಹೂ ಬಳ್ಳಿಗಳು ಹಾಗೂ ಪ್ರಾಣಿಗಳ ಚಿತ್ರಗಳಿವೆ. ಇವಲ್ಲದೆ ಬೃಹದಾಕಾರದ ಧಾನ್ಯಸಂಗ್ರಹಣೆಯ ಭರಣಿಗಳು ಕಾಲುಗಳುಳ್ಳ ಪಾತ್ರೆಗಳು, ಕಿನ್ನರಿ ಮುಖದ ಪಾತ್ರೆಗಳು, ಕಂಚಿನ, ಬೆಳ್ಳಿಯ ಹಾಗೂ ಗಾಜಿನ ಪಾತ್ರೆಗಳು ಹಾಗೂ ಅಲಂಕಾರಿಕ ವಸ್ತುಗಳು, ಅರಗಿನ ಮೆರಗ, ಪಾತ್ರೆಗಳು, ತಿಳಿಗಚ್ಚಿನ ಅಚ್ಚುಗಳು ಹಾಗೂ ಮೂರ್ತಿಗಳು ದೊರೆತಿವೆ. ಇವೆಲ್ಲಕ್ಕೂ ಮಿಗಿಲೆನಿಸುವಂತೆ ಹಸ್ತಿದಂತದ ಕೆತ್ತನೆಯ ಸುಮಾರು 600 ಕಲಾಕೃತಿಗಳ ಒಂದು ಸಂಪತ್ತೇ ಇಲ್ಲಿ ಸಿಕ್ಕಿದೆ. ಇವುಗಳಿಂದ ಆ ಕಾಲದ ಜನರ ನಿತ್ಯಜೀವನ, ಕಲೆ, ಶೃಂಗಾರಪ್ರಿಯತೆ ಮೊದಲಾದವುಗಳ ಬಗ್ಗೆ ತಿಳಿಯಬಹುದಾಗಿದೆ. ಭಾರತದ ಅಂದಿನ ಸಾಂಸ್ಕøತಿಕ ಕೇಂದ್ರಗಳಾದ ಬಾರ್ಹತ್, ಸಾಂಚಿ, ಅಮರಾವತಿ, ನಾಗಾರ್ಜುನಕೊಂಡ ಇವುಗಳ ಕಲೆಯ ಹಾಗೂ ರೋಮ್, ಚೀನ, ಈಜಿಷ್ಟ್ ಮೊದಲಾದ ದೇಶಗಳ ಸಂಸ್ಕøತಿಗಳ ಪ್ರಭಾವ ಇಲ್ಲಿ ಕಾಣಬಹುದು. ಸಾಂಚಿಯ ತೋರಣ, ಅಮರಾವತಿಯ ಪೂರ್ಣಘಟ ಇಲ್ಲಿಯ ಕೆತ್ತನೆಯ ಚಿತ್ರಗಳಲ್ಲಿ ತಮ್ಮದೇ ಆದ ಸ್ಥಾನ ಪಡೆದಿವೆ. 

	ಅನೇಕ ಹಸ್ತಿದಂತ ಫಲಕಗಳನ್ನು ಕಟ್ಟಿಗೆಯ ಚೌಕಟ್ಟಿನಲ್ಲಿ ಹಿತ್ತಾಳೆಯ ಕೊಂಡಿ ಮತ್ತು ಮೊಳೆಗಳ ಸಹಾಯದಿಂದ ಭದ್ರವಾಗಿ ಲಗತ್ತಿಸಲಾಗಿದ್ದು, ಫಲಕಗಳ ಹಿಂಬದಿಯಲ್ಲಿ ಆಭ್ರಕದÀ ಹಾಳೆಯನ್ನು ಅಂಟಿಸಲಾಗಿದೆ. ಕೆತ್ತನೆಯ ಚಿತ್ರಗಳಿಂದ ಈ ಕೆಳಗಿನ ಮುಖ್ಯ ಅಂಶಗಳು ತಿಳಿದುಬರುತ್ತವೆ. ಆ ಜನರು ಆನೆ, ಕುದುರೆ, ಎತ್ತು, ಎಮ್ಮೆ ಮೊದಲಾದ ಪ್ರಾಣಿಗಳನ್ನು ಸಾಕುತ್ತಿದ್ದರು. ಸಿಂಹ, ಜಿಂಕೆ ಮೊದಲಾದ ಕಾಡುಪ್ರಾಣಿಗಳನ್ನು ಬಲ್ಲವರಾಗಿದ್ದರು. ಬೇಟೆಯಲ್ಲಿ ಬಾಣ, ಬರ್ಜಿ, ಕತ್ತಿ ಮೊದಲಾದ ಆಯುಧಗಳನ್ನು ಉಪಯೋಗಿಸುತ್ತಿದ್ದರು. ಹೆಂಗಸರು ಸೀರೆ ಅಥವಾ ಉದ್ದನೆಯ ಜುಬ್ಬ ಧರಿಸುತ್ತಿದ್ದರು. ಶ್ರೀಮಂತರು ಸ್ತ್ರೀಯರು ಸಂಗೀತದಲ್ಲಿ ನಿಷ್ಣಾತರಾಗಿದ್ದು ತಾಳ, ಮದ್ದಲೆ, ವೀಣೆ, ಕೊಳಲು ಮೊದಲಾದ ವಾದ್ಯಗಳನ್ನು ನುಡಿಸುತ್ತಿದ್ದರು. ಕೆಲವು ಹೆಂಗಸರ ಭಾರತೀಯ ಅಂಗ ಸೌಷ್ಠವವನ್ನು ಹೊಂದಿದ್ದರೆ ಇನ್ನು ಕೆಲವರು ಗಿಡ್ಡಮೂಗು ಹಾಗೂ ಅಷ್ಟು ಅಗಲವಲ್ಲದ ಕಣ್ಣುಗಳನ್ನು ಹೊಂದಿದ್ದರು. ಈ ಕೆತ್ತನೆಯ ಚಿತ್ರಗಳು ಅನೇಕ ರಸಮಯ ದೃಶ್ಯಗಳನ್ನು ನಮ್ಮೆದುರಿಗಿರಿಸುತ್ತವೆ. ದರ್ಪಣ ಸುಂದರಿಯರು, ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಸ್ತ್ರೀಯರು, ಅನೇಕ ಭಂಗಿಗಳಲ್ಲಿರುವ ಮದನಿಕೆಯರು, ಶುಕಭಾಷಿಣಿಯರು, ಕೇಶಾಲಂಕಾರಗಳಲ್ಲಿ ನಿರತರಾದ ಸಿರಿವಂತ ಸ್ತ್ರೀಯರು ಮತ್ತು ಅವರ ಅಂಗರಕ್ಷಕಿಯರು ಹಾಗೂ ಪರಿಚಾರಕಿಯರು, ಕಲಹಂಸದೊಂದಿಗೆ ವಯ್ಯಾರದಿಂದ ಹೋಗುತ್ತಿರುವ ಹಂಸಗಮನೆಯರು-ಈ ರೀತಿ ಅನೇಕ ರಸ ಸನ್ನಿವೇಶಗಳನ್ನು ಕಾಣಬಹುದು. ಸ್ನಾನಮಾಡಿ ಕೂದಲಿನ ನೀರನ್ನು ತೆಗೆಯುವಾಗ ಆ ನೀರಿನ ಹನಿಗಳನ್ನು ಕುಡಿಯುತ್ತಿರುವ ಹಂಸದ ದೃಶ್ಯ, ಉದ್ದನೆಯ ಹಿಡಿಯ ಮುಚ್ಚಳದ ಪಾತ್ರೆಗಳಲ್ಲಿ ಸ್ತ್ರೀಯರು ಆಹಾರ ತೆಗೆದುಕೊಂಡು ಹೋಗುವ ದೃಶ್ಯ, ಕಾಲಿನ ನೂಪುರ ಜಾರಿದ ಮತ್ತು ತನ್ನ ನಲ್ಲನಿಗಾಗಿ ಕಾಯುವ ಪ್ರಣಯಗಾತಿಯ ಚಿತ್ರ ಮೊದಲಾದವು ಭಾವಪೂರಿತವಾಗಿವೆ. 

	ಮುಂಗಾಲಿನಿಂದ ಭೂಮಿ ಕೆದಕುತ್ತಿರುವ ಕುದುರೆ, ಸೊಂಡಿಲು ಸುತ್ತಿದ ಆನೆ, ಹಾರುತ್ತಿರುವ ಜಿಂಕೆ, ಬಾಲ ಮೇಲೆತ್ತಿ ಭೂಮಿ ಮೂಸುತ್ತಿರುವ ಸಿಂಹ ಭಾರತೀಯ ಬೌದ್ಧ ಶಿಲ್ಪಗಳನ್ನು ಸ್ಮøತಿಗೆ ತರುತ್ತಿದ್ದರೆ, ಮೀನ ಜೋಡಿಯ ಚಿತ್ರಗಳು ಮಥುರಾದ ಜೈನ ಆಯಕಪಟ್ಟಗಳ ಚಿತ್ರಗಳನ್ನು ಗಮನಕ್ಕೆ ತರುವಂತಿವೆ. ಪಶುದೇಹವುಳ್ಳ ಮನುಷ್ಯ, ರೆಕ್ಕೆಗಳುಳ್ಳ ಯಕ್ಷರು, ಕಿನ್ನರ ಕಿನ್ನರಿಯರು, ಅನೇಕ ಹೆಡೆಗಳುಳ್ಳ ಹಾವುಗಳು ಮೊದಲಾದವನ್ನು ಈ ಕೆತ್ತನೆಗಳಲ್ಲಿ ಕಾಣಬಹುದು. 

	ಇಲ್ಲಿಯ ಕಲಾಕಾರರು ಹೂಬಳ್ಳಿಗಳನ್ನು ತಮ್ಮ ಕೆತ್ತನೆಗಳಲ್ಲಿ ಹೇರಳವಾಗಿ ಉಪಯೋಗಿಸಿದ್ದಾರೆ. ಅವುಗಳಲ್ಲಿ ದ್ರಾಕ್ಷಿ, ಕಮಲ, ಬಾಲೆ ಮೊದಲಾದ ಹೂಗಳು ಹೆಚ್ಚು ಪ್ರಮಾಣದಲ್ಲಿವೆ. ಸುಸ್ಪಷ್ಟವಾಗಿ ಚಿತ್ರಿಸಿದ್ದ ಕಲಿಕಾ, ಕಂಟಕ, ಶಾಖ, ತ್ರಿಭಂಗ, ಪತ್ರ ಮೊದಲಾದ ಎಲ್ಲ ಅಂಶಗಳನ್ನು ಹೊಂದಿದ ಹೂಬಳ್ಳಿಗಳು ಇಲ್ಲಿಯ ಕಲಾವೈಶಿಷ್ಟ್ಯ ಸೂಚಿಸುತ್ತವೆ. ಒಟ್ಟಿನಲ್ಲಿ ಶ್ರೇಷ್ಠ ಮಟ್ಟದ ಸಂಸ್ಕøತಿಯ ಪ್ರಾಚೀನ ಕೇಂದ್ರಗಳಲ್ಲಿ ಬೇಗ್ರಾಮ್ ಪ್ರಮುಖವಾದದ್ದೆನ್ನಬಹದು. 
(ಎಂ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ